ನೀಳ್ಗತೆ -
	ನೀಳ್ಗತೆ ನೀಳವಾದ ಕತೆಯಾದರೂ ಕಿರು ಕಾದಂಬರಿಯಲ್ಲ. ಸಣ್ಣಕತೆಗಿಂತ ಎರಡೋ ಮೂರಷ್ಟೋ ದೊಡ್ಡದಾದ ಕತೆ ಅದೆಂದು ಇಟ್ಟುಕೊಳ್ಳಬಹುದು.

	15ನೆಯ ಶತಮಾನದ ಇಟಲಿಯಲ್ಲಿ ತೀರ ಚಿಕ್ಕವಲ್ಲದ ಮತ್ತು ಬಲು ದೊಡ್ಡದಲ್ಲದ ಗದ್ಯಕತೆಗೆ ನೊವೆಲ ಎಂಬ ಅಂಕಿತವಿತ್ತು. ಅದು ಮಹಾಕವಿ ಬೊಕಾಕ್ಟಿಯೊಜನಿತವಾಗಿ ಮ್ಯಾಸಿಯೋ ಬ್ಯಾಂಡೆಲೋ ಮೊದಲಾದವರಿಂದ ಬೆಳೆವಣಿಗೆ ಹೊಂದಿತು. ಸುದೀರ್ಘ ಕಥೆಗಳೂ ಹೊರಬಂದವು. ಅವುಗಳಿಗೆ ರೊಮಾನ್ಸ್ ಎಂದು ಹೆಸರು. ರೊಮಾನ್ಸ್ ಮುಂದೆ ಕಾದಂಬರಿಗೆ ಮೂಲವಾಯಿತು. ನೊವೆಲ ಕಿರಿಕಿರಿದಾಗುತ್ತ ಸಣ್ಣಕತೆಗೆ ಆಧಾರವಾಯಿತು. 

	18ನೆಯ ಶತಮಾನದ ಎರಡನೆಯ ಭಾಗದಲ್ಲಿ ಜರ್ಮನಿಯ ಲೇಖಕರು ಒಂದು ವಿಧದ ಕತೆಯನ್ನು ಬೆಳಕಿಗೆ ತಂದರು. ಅದರ ಹೆಸರು ನೊವೆಲ್. ಅನೇಕಾನೇಕ ನೊವೆಲ್‍ಗಳು ಹೊರಬಂದಾಗ ಆ ಪ್ರಭೇದದ ವಿವರಣೆಯೂ ವಿಮರ್ಶೆಯೂ ಅನಿವಾರ್ಯವಾಯಿತು. ಅದರಲ್ಲಿ ವಿಚಿತ್ರವಾದರೂ ಸತ್ಯವಾದ ಒಂದೇ ಒಂದು ಘಟನೆ ಇರಬೇಕು. ಎಂದು ಒಂದು ಸೂತ್ರವನ್ನು 1804ರಲ್ಲಿ ಷ್ಲೆಗಲ್ ಹೇಳಿದ. ಅದಕ್ಕೆ ಒಂದು ಅನಿರೀಕ್ಷಿತ ತಿರುಗಣೆ ಅತ್ಯಾವಶ್ಯಕ ಎಂದವನು ಟೇಕ್, 1829ರಲ್ಲಿ. ಆಮೇಲೆ ಬಂದ ಕತೆಗಾರ ಪಾಲ್ ಹೇಸ್ ಎಂಬಾತ ನೊವೆಲ್ ಕೃತಿಯ ತಂತ್ರಕ್ಕೆ ನೆರಳಿನಂಥ ಚಿತ್ರ ಹಾಗೂ ಡೇಗೆ ಎಂಬ ವರ್ಣನೆಯಿತ್ತು. ಹೀಗಾಗಿ ನೊವೆಲ್ ಕೂಡ 19ನೆಯ ಶತಮಾನದ ಆದಿಭಾಗದಲ್ಲಿ ವೃದ್ಧಿಹೊಂದು ಉತ್ತಮ ಸಾಹಿತ್ಯಪ್ರಕಾರವೆಂದು ಪ್ರಖ್ಯಾತಿಗೊಂಡ ಸಣ್ಣಕತೆಗೇ ಪ್ರೋತ್ಸಾಹಕವಾಯಿತು.

	ಆದರೂ ಉದ್ದದ ವಿಚಾರವಾಗಿ ನೊವೆಲ, ನೊವೆಲ್ ಎರಡೂ ಸಾಹಿತಿಗೆ ಸ್ವಲ್ಪ ಸ್ವಾತಂತ್ರ್ಯವನ್ನು ಕೊಟ್ಟೇಕೊಟ್ಟವು. ಸಣ್ಣ ಕತೆಯಲ್ಲಿ ಪಳಗಿದ ಪ್ರವೀಣನೂ ಕೆಲವೊಮ್ಮೆ ಕತೆಯನ್ನು ವಿಸ್ತಾರಗೊಳಿಸುವ ಹಂಗಿಗೆ ಒಳಗಾದರು. ಅವರ ನೀಳ್ಗತೆಗಳು ಅವರ ಸಣ್ಣಕಥೆಗಳಷ್ಟೇ ಕಲಾಯುಕ್ತ, ಆಹ್ಲಾದಕರ, ಸ್ವಿಕಾರಯೋಗ್ಯ.

	ಸಮರ್ಥಸಾಹಿತಿಗೆ ಸಣ್ಣಕತೆ ನೀಳ್ಗತೆಗಳಿಗಿರುವ ರಸಸೂಕ್ಷ್ಮ ವ್ಯತ್ಯಾಸ ಚೆನ್ನಾಗಿ ಗೊತ್ತು. ಊರು ಬೆಳೆದು ಒಂದು ಬಡಾವಣೆಯನ್ನು ಹೊಂದಿ ಅದನ್ನೂ ಸೇರಿಸಿಕೊಂಡು ದೊಡ್ಡ ಊರಾಗುತ್ತದೆ. ಅಂತಲ್ಲ ನೀಳ್ಗತೆ. ಸಣ್ಣಕತೆಗೆ ಕೆಲವು ಅಂತ ಜೋಡಿಯಾದರೆ ನೀಳ್ಗತೆ ಉಂಟಾಗುವುದಿಲ್ಲ. ಎರಡಕ್ಕೂ ತಮ್ಮ ತಮ್ಮದೇ ಆದ ಅಸ್ತಿತ್ವ, ರಚನಾವಿಧಿ, ಪ್ರಭಾವ ಇವೆ. ಹಾತಾರ್ನ್, ಹೆನ್ರಿ ಜೇಮ್ಸ್, ತಾಮಸ್ ಹಾರ್ಡಿ, ಟಾಲ್‍ಸ್ಟಾಯ್ ಮೊದಲಾದವರನ್ನು ಇಲ್ಲಿ ಮೇಲ್ಪಂಕ್ತಿಯೆಂದು ಭಾವಿಸಬೇಕು. ಕನ್ನಡದಲ್ಲಿ ಶ್ರೀನಿವಾಸ ವಿರಚಿತ ಸುಬ್ಬಣ್ಣ ಉತ್ಕøಷ್ಟ ನೀಳ್ಗತೆ. ಒಂದು ದೃಷ್ಟಿಯಿಂದ ನೀಳ್ಗತೆಯ ನಿರ್ಮಾಣ ದಿಟವಾಗಿ ಹೊಣೆಗಾರಿಕೆಯ ಕೆಲಸ, ಶ್ರಮಸಾಧ್ಯಕಾರ್ಯ, ಸಂಕೋಚ ವೈಶಾಲ್ಯಗಳನ್ನು ಯುಕ್ತ ಪ್ರಮಾಣದಲ್ಲಿ ಬೆರಸಿ ಸಮರಸ ದನಿ ಏಳುವಂತೆ ಈ ಸಾಹಿತ್ಯ ಕೃತಿಯನ್ನು ಕಟ್ಟಬೇಕು. ಸಣ್ಣ ಕತೆಗಾರರು ಬರೆದಿರುವ ನೀಳ್ಗತೆಗಳು ಸಮರ್ಪಕವಾಗಿರುವಂತೆ ಕಾದಂಬರಿಕಾರರು ಬರೆದಿರುವುವು ಏತಕ್ಕೋ ಕಾಂತಿಯುಕ್ತವಾಗಿಲ್ಲ. ಚಾರಲ್ಸ್ ಡಿಕನ್ಸನನ್ನು ನಿದರ್ಶನವಾಗಿ ತೆಗೆದುಕೊಳ್ಳಬಹುದು. ಏತಕ್ಕೆಂದರೆ ನೀಳ್ಗತೆ ಕಾದಂಬರಿಯೆಂಬ ಒಂಟೆ ಹಾಕಿದ ಚಿಕ್ಕ ಮರಿಯಲ್ಲ. ಸಣ್ಣ ಕತೆಯೆಂಬ ಹಸು ಹಾಕಿದ ದೊಡ್ಡಕರು.					(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ